ಸತ್ಯದರ್ಶಿನಿ ಸುದ್ದಿ ತುಮಕೂರು: ರಾಜ್ಯದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡೆದು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸದ್ದು ಮಾಡಿರುವ ಬೆನ್ನಲ್ಲೇ ಜಿಲ್ಲೆಯ ಮಹರ್ಷಿ ವಾಲ್ಮೀಕಿಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ೨೪ ಲಕ್ಷ ರೂ. ಗೋಲಾಮಾಲ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ರಾಜ್ಯ ಸರ್ಕಾರ ವಿವಿಧ ಅಭಿವೃದ್ಧಿ ನಿಗಮಗಳನ್ನು ಸ್ಥಾಪನೆ ಮಾಡಿ ಆಯಾಯ ಸಮುದಾಯದ ಜನರಿಗೆ ಸಲಾ ಸೌಲಭ್ಯ ಸೇರಿದಂತೆ ವಿವಿಧ ಯೋಜನೆಗಳ ಅನುಕೂಲ ಕಲ್ಪಸಿಕೊಡಲು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಆದರೆ, ಸರ್ಕಾರದ ಆಶಯಗಳನ್ನೇ ಬುಡಮೇಲೆ ಮಾಡುತ್ತಿರುವ ನಿಗಮದ ಅಧಿಕಾರಿಗಳು ಬಡವರಿಗೆ ಸರ್ಕಾರದ ಸೌಲಭ್ಯ ಗಳನ್ನು ತಲುಪಿಸದೆ ತಾವೇ ನುಂಗಿ ನೀರು ಕುಡಿಯುತ್ತಿರುವ ಪ್ರಕರಣಗಳು ಇದೀಗ ಹೊರ ಬರುತ್ತಿವೆ.
ತುಮಕೂರು ಜಿಲ್ಲಾ ವಾಲ್ಮೀಕಿ ಮಹರ್ಷಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ 12 ಫಲಾನುಭವಿಗಳಿಗೆ ಮಂಜೂರಾಗಿದ್ದ 24 ಲಕ್ಷ ರೂ.ಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕ ಹಾಗೂ ಪಾವಗಡ ಶಿರಾ ತಾಲ್ಲೂಕಿನ ಅಧಿಕಾರಿಯೊಬ್ಬ ನಕಲಿ ಸಹಿ ಸೃಷ್ಟಿ ಮಾಡಿ ಫಲಾನುಭವಿಗಳ ಸಾಲದ ಹಣ ದುರುಪಯೋಗ ಪಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಶಿರಾ ಮತ್ತು ಪಾವಗಡ ತಾಲ್ಲೂಕಿನ 12 ಮಂದಿ ಫಲಾನುಭವಿಗಳ ದಾಖಲಾತಿಗಳನ್ನು ಮಧ್ಯವರ್ತಿಗಳಿಂದ ಸಂಗ್ರಹಿಸಿಕೊಂಡಿರುವ ನಿಗಮದ ಅಧಿಕಾರಿಗಳು 2021ರಲ್ಲಿ ಅಂದಿನ ಸಂಸದರ ನಕಲಿ ಶಿಫಾರಸ್ಸು ಪತ್ರ ಸೃಷ್ಟಿಸಿ ಅವರ ಸಹಿಯನ್ನೂ ನಖಲು ಮಾಡಿದ್ದಾರೆ. ಜೊತೆಗೆ 12 ಮಂದಿ ಫಲಾನುಭವಿಗಳ ಸಹಿಯನ್ನು ನಕಲು ಮಾಡಿ ಅವರಿಗೂ ವಂಚಿಸಿ ಅವ್ಯವಹಾರ ಎಸಗಿದ್ದಾರೆ.
ಶಿರಾ ತಾಲ್ಲೂಕಿನ ಮಂಜಮ್ಮ, ಲೀಲಾವತಿ, ಶಿವಮ್ಮ, ಮಹಾಲಿಂಗಮ್ಮ, ರಾಧಮ್ಮ, ಶಶಿಧರ್, ಪಾವಗಡ ತಾಲ್ಲೂಕಿನ ಗೋವಿಂದ, ಜಗದೀಶ್, ಸುಪ್ರೀತ್, ಮಾರುತಿ, ಮಂಜುನಾಥ್, ಪ್ರಭಾವತಿ ರವರುಗಳಿಗೆ ವಂಚಿಸಿ ನಿಗಮದ ಅಧಿಕಾರಿಗಳು ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ.
2021ರಲ್ಲಿ ೧೨ ಮಂದಿ ಫಲಾನುಭವಿಗಳಿಗೆ ನಿಗಮದಿಂದ ಬ್ಯಾಂಕ್ ಮೂಲಕ ಸಾಲ ಮಂಜೂರು ಮಾಡುವಂತೆ ಅಂದಿನ ಸಂಸದರ ಶಿಫಾರಸ್ಸು ಪತ್ರವನ್ನು ಸೃಷ್ಟಿ ಮಾಡಿ ಸಹಿಯನ್ನೂ ನಕಲು ಮಾಡಿರುವ ನಿಗಮದ ಅಧಿಕಾರಿಗಳು ಫಲಾನುಭವಿಗಳಿಂದ ಮಧ್ಯವರ್ತಿಗಳ ಮುಖೇನ ಸಾಲ ಮಂಜೂರಾತಿಗಾಗಿ ಅರ್ಜಿ, ಬ್ಯಾಂಕ್ ಪಾಸ್ ಪುಸ್ತಕ ಇನ್ನಿತರೆ ದಾಖಲಾತಿಗಳನ್ನು ಸಂಗ್ರಹಿಸಿಕೊಂಡಿದ್ದಾರೆ.. ಆದರೆ, ಸಾಲದ ಹಣವನ್ನು ಮಾತ್ರ 2024-2ನೇ ಸಾಲಿನಲ್ಲಿ ಮಂಜೂರು ಮಾಡಿಸಿಕೊಂಡು ಅವರಿಗೆ ನೀಡದೆ ನುಂಗಿ ನೀರುಕುಡಿದಿದ್ದಾರೆ.
ಸದರಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ದ ಬಗ್ಗೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿ ಗಳು ಪ್ರಾಮಾಣಿಕವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ವಂಚನೆಗೊಳಗಾಗಿರುವ ಫಲಾನುಭವಿಗಳು ಆಗ್ರಹಿಸಿದ್ದಾರೆ.