Ad imageAd image

ಒಕ್ಕಲಿಗರು ಉದ್ದಿಮೆ ಆರಂಭಿಸಿ ಆರ್ಥಿಕ ಸದೃಢತೆ ಬೆಳೆಸಿಕೊಳ್ಳಿ ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್ ಶಾಖೆ ಉದ್ಘಾಟಿಸಿದ ಜಯರಾಮ್ ಸಲಹೆ

SD Editor
2 Min Read

ತುಮಕೂರು:ವ್ಯವಸಾಯ ನಂಬಿಕೊಂಡು ದೇಶದ ಆಹಾರಭದ್ರತೆಗೆ ನೆರವಾಗಿದ್ದ ಒಕ್ಕಲಿಗರು ಉದ್ಯಮ ಸ್ಥಾಪನೆ ಮಾಡಿ ಉದ್ಯೋಗ ಸೃಷ್ಟಿ ಮಾಡಿ ದೇಶದ ಆರ್ಥಿಕತೆಗೂ ಕೊಡುಗೆ ನೀಡಲು ಮುಂದೆ ಬರಬೇಕು, ಒಕ್ಕಲಿಗ ಯುವ ಪೀಳಿಗೆ ಉದ್ದಿಮೆದಾರರಾಗುವತ್ತ ಆಸಕ್ತಿ ವಹಿಸಬೇಕು ಎಂದು ಉದ್ಯಮಿ ಒಕ್ಕಲಿಗ ಆಶಯದ ಫಸ್ಟ್ ಸರ್ಕಲ್‌ನ ಮಾರ್ಗದರ್ಶಿ, ರಾಜ್ಯ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಜಯರಾಮ್ ರಾಯಪುರ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್‌ನ ತುಮಕೂರು ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವ್ಯವಸಾಯ ಮಾಡಿಕೊಂಡಿರುವ ಒಕ್ಕಲಿಗರು ತಮ್ಮ ಮಕ್ಕಳು ಹೆಚ್ಚೆಂದರೆ ಯಾವುದಾದರು ಉದ್ಯೋಗ ಪಡೆಯುವುದು ಹೊರತಾಗಿ ಅದರಿಂದ ಆಚೆಗೆ ಚಿಂತನೆ ಮಾಡಿರಲಿಲ್ಲ. ಆದರೆ ಈಗ ಒಕ್ಕಲಿಗರು ಉದ್ದಿಮೆ ಸ್ಥಾಪನೆ ಮಾಡಿ, ಉದ್ಯೋಗ ಸೃಷ್ಟಿ ಮಾಡುವತ್ತ ಗಮನ ಹರಿಸುತ್ತಿರುವುದು ಸಮಾಜದಲ್ಲಿ ಆಶಾದಾಯಕ ಬೆಳವಣಿಗೆ. ಉದ್ಯಮಿ ಒಕ್ಕಲಿಗರಿಗೆ, ಉದ್ಯಮ ಆರಂಭಿಸಲು ಮುಂದೆಬರುವ ಒಕ್ಕಲಿಗರಿಗೆ ಶಕ್ತಿ ತುಂಬುವ ಆಶಯದಿಂದ ಜನವರಿ ೩,೪ ಮತ್ತು ೫ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ ಹಮ್ಮಿಕೊಳ್ಳಲಾಗಿದೆ ಎಂದರು.

ಸ್ವಂತ ಉದ್ಯಮ ಆರಂಭಿಸಿ, ನೂರಾರು ಜನರಿಗೆ ಉದ್ಯೋಗ ನೀಡಿ ಅವರ ಬದುಕಿಗೆ ನೆರವಾಗುವವರಿಗೆ ಸಮಾಜದಲ್ಲಿ ಸ್ಥಾನಮಾನ, ಗೌರವ ದೊರೆಯಬೇಕು. ಯಾವುದೇ ಕೆಲಸ ಮಾಡುವವರು ಸಮಾಜದಲ್ಲಿ ಸ್ಥಾನಮಾನದ ಅಪೇಕ್ಷೆ ಪಡುವುದು ಸಹಜ. ಅಂತಹ ಉದ್ಯಮ ಸೇವೆಯಲ್ಲಿರುವವರನ್ನು ಗೌರವಿಸಿದರೆ ಅವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಇಂದು ಉದ್ಯಮ ಆರಂಭಿಸಲು ಯುವಕರು ಹೆದರುತ್ತಾರೆ. ಲಾಭ ಮಾಡಿದವರೊಂದಿಗೆ ನಷ್ಟ ಅನುಭವಿಸಿದವರೂ ಇದ್ದಾರೆ. ಆಂತಹವರಿಗೆ ಒಕ್ಕಲಿಗ ಉದ್ಯಮಿಗಳು ಸಹಕರಿಸಿ ಶಕ್ತಿ ತುಂಬಿ ಪರಸ್ಪರ ಬೆಳೆಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

- Advertisement -
Ad image

ದಕ್ಷಿಣ ಕರ್ನಾಟಕದಲ್ಲಿ ಜನಸಂಖ್ಯೆ ಹೆಚ್ಚಾಗಿದೆ.ಅವರನ್ನು ಗ್ರಾಹಕರನ್ನಾಗಿ ಬಳಸಿಕೊಳ್ಳಬೇಕು. ನಿಮ್ಮ ಉತ್ಪಾದನೆಗಳನ್ನು ಅವರಿಗೆ ತಲುಪಿಸುತ್ತೇನೆ ಎಂಬ ವಿಶ್ವಾಸದಲ್ಲಿ ಕಾರ್ಯನಿರ್ವಹಿಸಿದರೆ ಯಶಸ್ವಿಯಾಗಬುದು. ಉದ್ಯಮ ಮಾತ್ರವಲ್ಲ, ಒಕ್ಕಲಿಗರು ವ್ಯಾಪಾರ, ವ್ಯವಹಾರಗಳಲ್ಲೂ ತೊಡಗಿಸಿಕೊಂಡು ಆರ್ಥಿಕ ಸದೃಢತೆ ಬೆಳೆಸಿಕೊಂಡಾಗ ನಾಯಕತ್ವ ರೂಪಿಸುವಷ್ಟೂ ಶಕ್ತಿ ಬರುತ್ತದೆ ಎಂದು ಜಯರಾಮ್ ರಾಯಪುರ ತಿಳಿಸಿದರು.

ಪಟ್ಟನಾಯಕನಹಳ್ಳಿ ಮಠದ ಡಾ.ನಂಜಾವಧೂತ ಸ್ವಾಮೀಜಿ ಮಾತನಾಡಿ, ಉದ್ದಿಮೆ ಸ್ಥಾಪನೆ ಎಂಬುದು ಕೇವಲ ತನ್ನ ಬೆಳವಣಿಗೆಗೆ ಅಲ್ಲ, ಇತರರಿಗೂ ಸಹಾಯ ಮಾಡಬಹುದು ಎಂಬುದಾಗಿರುತ್ತದೆ. ಸಮಾಜದ ಇತರರ ಹಿತಾಸಕ್ತಿ ಬೆಳೆಸಿಕೊಂಡು ಬೆಳೆಯುವುದು ಒಳ್ಳೆಯ ಸಂಕಲ್ಪ. ಇಂತಹ ಚಿಂತನೆಗಳು ನಮ್ಮನ್ನು ಎತ್ತರಕ್ಕೆ ಕರೆದೊಯ್ಯತ್ತವೆ ಎಂದು ಹೇಳಿದರು.

ಪ್ರೇರಣಾದಾಯಕ
ಉದ್ಯಮಿ ಒಕ್ಕಲಿಗೆ ಕಾರ್ಯಕ್ರಮ ಆಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ನಗರದ ಯುವ ಉದ್ಯಮಿ ಪ್ರಮೋದ್‌ಗೌಡ, ಇದೂವರೆಗೆ ಕೃಷಿ ಅನುಸರಿಸಿ ಒಕ್ಕಲಿಗರು ಹಲವಾರು ಜನರಿಗೆ ನೆರವಾಗುತ್ತಿದ್ದರು. ಈಗ ವ್ಯವಸಾಯ ಹಿಂದಿನಷ್ಟು ಸುಲಭವೂ ಆಲ್ಲ, ಲಾಭದಾಯಕವೂ ಅಲ್ಲ ಎನ್ನುವಂತಾಗಿದೆ. ಈ ಸ್ಥಿತಿಯಲ್ಲಿ ಒಕ್ಕಲಿಗ ಸಮಾಜದ ಯುವ ಜನರು ಉದ್ದಿಮೆಗಳನ್ನು ಆರಂಭಿಸಿ ಬೆಳೆಯಬೇಕು ಎಂದು ಹೇಳಿದರು.

ಮತ್ತೊಬ್ಬ ಯುವ ಉದ್ಯಮಿ ಸಿ.ಕೆ.ಗೌಡರು ಮಾತನಾಡಿ, ಸಮಾಜದ ಬೆಳವಣಿಗೆಗೆ ಕೊಡುಗೆ ನೀಡುತ್ತಾ ಬಂದಿರುವ ಒಕ್ಕಲಿಗರು ವ್ಯಾಪಾರ, ಉದ್ದಿಮೆ ಆರಂಭಿಸಿ ಅದರಲ್ಲೂ ಮೊದಲಿಗರಾಗಿ ಬೆಳೆಯಲು ಅವಕಾಶಗಳಿಗೆ, ಅವಕಾಶಗಳನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಲಿ ಎಂದರು.

ಮಾಜಿ ಶಾಸಕ ಹೆಚ್.ನಿಂಗಪ್ಪ, ಹಾಲಪ್ಪ ಪ್ರತಿಷ್ಠಾನ ಅಧ್ಯಕ್ಷ ಮುರಳಿಧರ ಹಾಲಪ್ಪ, ರಾಜ್ಯ ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿ ಹನುಮಂತರಾಯಪ್ಪ, ನಿರ್ದೇಶಕ ಡಿ.ಎನ್.ಲೋಕೇಶ್, ನಿವೃತ್ತ ಪ್ರಾಚಾರ್ಯ ಡಾ.ಎಂ.ಕೆ.ವೀರಯ್ಯ, ಭೈರವೇಶ್ವರ ಬ್ಯಾಂಕ್ ಅಧ್ಯಕ್ಷ ವೆಂಕಟೇಶ್‌ಬಾಬು, ನಿರ್ದೇಶಕ ಬೆಳ್ಳಿ ಲೋಕೇಶ್, ಮುಖಂಡರಾದ ಎಸ್.ಆರ್.ಗೌಡ, ಭೈರವ ಗಿರೀಶ್, ಫಸ್ಟ್ ಸರ್ಕಲ್‌ನ ಜಿಲ್ಲಾ ಮುಖ್ಯಸ್ಥರಾದ ಎಚ್.ಎಸ್.ಮಂಜುನಾಥ್, ಆನಂದಕುಮಾರ್, ಮುಖಂಡರಾದ ವೈ.ಸಿ.ಲಕ್ಕಪ್ಪ, ಮುನಿಗಂಗಪ್ಪ, ಡಿಸಿಎಫ್ ಅನುಪಮಾ, ಲಕ್ಕೇಗೌಡ, ಧರಣೇಂದ್ರಕುಮಾರ್, ಸಿದ್ಧರಾಜುಗೌಡ, ಜಿ.ಎಸ್.ಶ್ರೀಧರ್. ದೊಡ್ಡಲಿಂಗಪ್ಪ ಸೇರಿದಂತೆ ವಿವಿಧ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this Article